ಜ್ಞಾನಧಾರೆ: ಚರಿತ್ರೆ 📚. 🌸ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...🌸*. ಸಂಚಿಕೆ- 01

*🟦~~~~~~~✦ ﷽ ✦~~~~~~🟦*

*📚 ಜ್ಞಾನಧಾರೆ: ಚರಿತ್ರೆ 📚*

*🌸ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿ ಸುಲೈಮಾನ್ ನೆಬಿ(ಅ) ರವರ ಜೀವನ ಚರಿತ್ರೆ...🌸*

🌿🌿🌿🌿🌿🌿🌿🌿🌿🌿

*🎈ಸಂಚಿಕೆ- 01*

*ಓರ್ವ* ರಾಜನಿಗೆ ಇರಬೇಕಾದ ಸಕಲ ಯೋಗ್ಯತೆಗಳನ್ನು ಸಣ್ಣ ಪ್ರಾಯದಲ್ಲೇ ಮಗನಾದ ಸುಲೈಮಾನ್ ಕಲಿಯುತ್ತಾರೆ. ಕೆಲವೊಮ್ಮೆ ಜನರೆಡೆಯಲ್ಲಿ ತರ್ಕ ವಿತರ್ಕ ಕೇಸುಗಳು ಉಂಟಾಗಿ ಅದಕ್ಕೆ ಸಮಗ್ರ ಪರಿಹಾರ‌ ಸಿಗಲು ತಂದೆಯ ಬಳಿ ಬರುವುದುಂಟು. ಆಗ ತಂದೆ ವಿಚಾರಣೆ ಮಾಡುವಾಗ ಮಗ ಸುಲೈಮಾನ್ ಕಣ್ಣು ಮಿಟುಕಿಸದೆ ನೋಡುತ್ತಾ, ವಾದ ವಿವಾದಗಳನ್ನು ಸಮಗ್ರವಾಗಿ ಆಲಿಸುತ್ತಾರೆ. ದ್ವಿ‌ ಪಕ್ಷದ ವಾದವನ್ನು ಆಲಿಸಿದ ನಂತರ ಅಪರಾಧಿ ಯಾರು ಎಂದು ತಕ್ಷಣವೇ ಮನದಟ್ಟು ಮಾಡುವರು. ಆತನಿಗೆ ನೀಡಬೇಕಾದ ಶಿಕ್ಷೆಯನ್ನೂ ತನ್ನ ಮನದಾಳದಿ ಕಾಣುವರು. ಅದು ಬಹುತೇಕವಾಗಿ ತಂದೆಯ ವಿಧಿಗೆ ಸರಿಸಮಾನವಾಗಿರುತ್ತಿತ್ತು. ತಂದೆಯ ವಿಧಿ ಸಮರ್ಥನೀಯವಲ್ಲ ಎಂದು ತನಗೆ ತೋಚಿದರೆ ಅದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದು ಮಗನ ಚಾಕಚಕ್ಯ ಮಾತು ಕೇಳಿ ತಂದೆಯು ತನ್ನ ಪುತ್ರನ ಅಭಿನಂದಿಸುತ್ತಿದ್ದರು. ಆ ವಾದ ಅಂಗೀಕರಿಸುತ್ತಿದ್ದರು. ಇಂತಹ ಹಲವಾರು ಸಂಭಾವ್ಯ ಘಟನೆಗಳು ಮಹಾನರ ಬಾಲ್ಯದಲ್ಲಿ ಸಂಭವಿಸಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಮಗು ತನ್ನ ಛಾಯೆ ಮೂಡಿಸಿ ಪರಿಪೂರ್ಣವಾಗಿ‌ ತನ್ನನ್ನು ಪಳಗಿಸಿಕೊಂಡು ಬೆಲೆಕಟ್ಟಲಾಗದ ಅತ್ಯಮೂಲ್ಯ ಜ್ಞಾನ ಆ ಮೂಲಕ ಮಗುವಿಗೆ ಬಾಲ್ಯದಲ್ಲೇ ಲಭಿಸುತ್ತದೆ.

*ತಂದೆಯ* ಕುರಿತು ಎಣಿಸಲಸಾಧ್ಯ ನೆನಪುಗಳಾಗಿದೆ ಮಗನ ಮನದಲ್ಲಿ ಅಡಗಿರುವುದು. ಅದೆಲ್ಲವೂ ಸದಾಕಾಲವೂ ಸ್ಮರಿಸಬೇಕಾದ ನೆನಪುಗಳಾಗಿ ಮಗನ ಮನದಾಲದಿ ಅವಿತುಕೊಂಡಿರುತ್ತದೆ.

*ತಂದೆಯ* ಅಂತ್ಯ ಶ್ವಾಸೋಚ್ಛಾಸದ ಗಳಿಗೆ ನೆನಪಿಸುವಾಗ ಸುಲೈಮಾನ್ ನೆಬಿಗೆ ತುಂಬಾ ಅತಿಶಯವಾಗುತ್ತದೆ. ತಂದೆಗೆ ಕೆಲವು ಪ್ರತ್ಯೇಕ ರೂಢಿಯಿತ್ತು. ಮನೆಯಿಂದ ಹೊರ ಹೋಗುವಾಗ ತಾನು ವಾಸಿಸುವ ಮನೆಯ ಕಿಟಕಿ, ಬಾಗಿಲುಗಳು ಪೂರ್ಣವಾಗಿ ಮುಚ್ಚಿ ಹಾಕಿ ಹೋಗುತ್ತಿದ್ದು ತಂದೆಯ ಹೊರತು ಯಾರೂ ಆ ಮನೆಯ ಒಳ ಹೋಗುವಂತಿರಲಿಲ್ಲ. ಮಹಿಳೆಯರು, ಮಕ್ಕಳು, ಕೆಲಸಗಾರರು ಎಲ್ಲರೂ ಮನೆಯ ಮತ್ತೊಂದು ಭಾಗದಲ್ಲಿರುವರು. ಈಗಿರುವಾಗ ಒಮ್ಮೆ ತಂದೆ ಬಾಗಿಲುಗಳು ಭದ್ರವಾಗಿ ಮುಚ್ಚಿ ಮನೆಯಿಂದ ಹೊರ ಹೋಗಿದ್ದರು. ಆಗ ಆಶ್ಚರ್ಯವೆಂಬಂತೆ ಬಂದು ಮಾಡಿದ ಮನೆಯ ಒಳಗೆ ಒಬ್ಬರು ಪ್ರವೇಶಿಸಿದ್ದರು. ಮನೆಯ ಬಾಗಿಲು ನೋಡಿದರೆ ತಂದೆ ಬೇಡಿ ಹಾಕಿ ಕಟ್ಟಿದಂತೆ ಇತ್ತು. ತಂದೆ ಬಂದು ಬೇಡಿ‌ ತೆರೆದು ಬಾಗಿಲು ತೆರೆದಾಗ ಓರ್ವ ಆಗಂತುಕ ತಂದೆಯ ಮುಂದೆ ನಿಂತಿದ್ದರು. ಪ್ರವಿಶಾಲ ಕೋಣೆಯ ಮಧ್ಯದಲ್ಲಿ ಶಾಂತಗಂಭೀರ, ಸ್ಪುರದ್ರೂಪಿಯಾದ ಓರ್ವನ ನಿಲ್ಲುವಿಕೆ ಕಂಡು ಮಹಾನರಿಗೆ ಅತಿಶಯವುಂಟಾಗುತ್ತದೆ.

*ಮಹಾನರು* ಕೇಳುತ್ತಾರೆ: ತಾವು ಯಾರು..!?
ಸಂಕೋಲೆಯಿಂದ ಕಟ್ಟಿ ಹಾಕಿದ‌ ಮನೆಯ ಒಳಗೆ ತಾವು ಹೇಗೆ ಪ್ರವೇಶಿಸಿದ್ದೀರಿ..!? ಕೊಂಚ ಗೌರವಯುತವಾದ ಮಹಾನರ ಪ್ರಶ್ನೆ.

*ಆಗಂತುಕನು* ಒಂದಲ್ಪವೂ ಅಲುಕದೆ ಗಾಂಭೀರ್ಯ ತುಳುಂಕಿತ ಸ್ವರದಲ್ಲಿ ಉತ್ತರಿಸುತ್ತಾರೆ. ನಾನು ರಾಜರುಗಳ ಹೆದರದ ಯಾವುದೇ ಅಡ್ಡಿ ಮರೆ ಇದ್ದರೂ ಅದು ನನ್ನನ್ನು ತಡೆಯದ ಓರ್ವನಾಗಿದ್ದೇನೆ.

*ತಂದೆ* ಚಿಂತಾಕ್ರಾಂತರಾಗಿ ಹೇಳಿದರು "ಸರಿಯಾಗಿರಬಹುದು, ಮನೆಯ ಬಾಗಿಲುಗಳಿಗೆ ಸುಭದ್ರವಾಗಿ ಕಟ್ಟಿ ಹಾಕಿದ ಸಂಕೋಲೆಗಳು ಈತನಿಗೆ ಯಾವುದೇ ತಡೆಗೋಡೆಯಲ್ಲ."

*ಹಾಗಾದರೆ* ಇವರು ಯಾರು..?
ಹಾ..! ಫರಿಸ್ತೆ(ಮಲಕು),‌ ಮಲಕುಲ್ ಮೌತ್ ಅಝ್ರಾಯೀಲ್(ಅ),‌ ಮನುಷ್ಯ ಶರೀರದ ಅವಧಿ ಮುಗಿದಾಗ ಆತ್ಮವನ್ನು ಹಿಡಿದು ಕೊಂಡು ಹೋಗುವ ಮಲಕು, ಅಲ್ಲಾಹನ ಆಜ್ಞೆ ಪಾಲಿಸಿ ತನ್ನ ರೂಹ್(ಆತ್ಮ) ಶರೀರದೊಂದಿಗೆ ಇರುವ ಬಂಧ ವಿಚ್ಛೇದಿಸಲು ಬಂದ ಮಲಕಾಗಿದ್ದಾರೆ ಇವರು ಎಂದು ಮಹಾನರಾದ ದಾವೂದ್ ನೆಬಿ(ಅ) ರವರಿಗೆ ಅನಿಸಿತು. ಅದು ಸತ್ಯವಾಗಿತ್ತು ಕೂಡಾ.

*ಆಗ ಅಝ್ರಾಯೀಲ್(ಅ) ಮಾತು ಆರಂಭಿಸಿದರು..*
ಓ ದಾವೂದ್ ನೆಬಿ(ಅ) ರವರೇ..ತಮಗೆ ಈ ಭೂಲೋಕದಿಂದ ಅಲ್ಲಾಹು ಕೊಟ್ಟ ಸಮಯ ಮುಗಿದಿದೆ. ತಮಗೆ ಅಲ್ಲಾಹು ವಿಧಿಸಿದ ಆಯುಷ್ಯ, ಆಹಾರ, ನೀರು ಎಲ್ಲವೂ ಮುಗಿದಿದೆ. ಈ‌ ನಶ್ವರವಾದ ಲೋಕದಿಂದ ವಿದಾಯ ಹೂಡಿ ಶಾಶ್ವತವಾದ ಲೋಕದತ್ತ ಪ್ರಯಾಣ ಮಾಡುವ ಸಮಯವಾಗಿದೆ. ತಾವು ಸನ್ನದ್ಧರಾಗಿರಿ..

*ಇನ್ನೇನೂ* ಹೇಳಲು ಬಾಕಿಯಿಲ್ಲ, ಹೇಳಬೇಕಾದ‌ ಮಾತು ಎಲ್ಲವೂ ಮುಗಿದು ಹೋಗಿದೆ. ಒಂದು ಮನುಷ್ಯ ಆಯುಷ್ಯದಲ್ಲಿ ಒಬ್ಬರ‌ ನಾಲಗೆಯಿಂದ ಉದುರುವ ಪದಗಳಿಗೆ ಒಂದು ಮಿತಿಯಿದೆ.‌ ಇಲ್ಲಿ ನನ್ನ ಅವಧಿ ಮುಗಿದಿದೆ. ಅದಕ್ಕೆ ನನ್ನಂತೆ ಪ್ರತಿಯೊಬ್ಬರೂ ಅಧೀನರಾಗಲೇಬೇಕು. 

*ಶರೀರದಿಂದ* ಆತ್ಮ ಹೊರ ಹೋಯಿತು. ಒಳ್ಳೆಯ ಶಾಂತಿಯುತ ಗಾಂಭೀರ್ಯವುಳ್ಳ ಅಂತ್ಯ. ಅನುಗ್ರಹೀತ ಮರಣ. ಹೃದಯ, ಮುಖ ಸುಕೋಮಲವಾಗಿ ಬೆಳಗಿ ಮರಣ ಹೊಂದಿದರು. ‌

*ಅಂದು* ಸುಲೈಮಾನ್ ನೆಬಿಯವರಿಗೆ ಹದಿಮೂರು ವರ್ಷ ಪ್ರಾಯ.‌ ಅಲ್ಲಾಹನ ಪ್ರವಾದಿವರ್ಯರ ಪಾವನ ಅಂತಿಮ ದರ್ಶನ ಕಾಣಲು ಜನ ಮುಗಿ ಬೀಳುತ್ತಿದ್ದರು. ಮಹಾ ಸಾಗರದಂತೆ ಜನರು ಹರಿದು ಬರುತ್ತಿದ್ದದ್ದು ದುಃಖತಪ್ತನಾದ ಮಗ ಈ ಎಲ್ಲಾ ದೃಶ್ಯ ಕಾಣುತ್ತಿದ್ದರು.

*ಮಹಾನರ* ವಿದಾಯದಿಂದ ಪ್ರತಿಯೊಂದು ಸಂದರ್ಶಕರು, ಅನುಚರರ ಮುಖವೂ ಕಣ್ಣಂಬನಿಯಿಂದ ತೇವಗೊಂಡಿತ್ತು.‌ ದುಃಖ ಮಡುಗಟ್ಟಿ ಕಣ್ಣೀರ ಶೋಕಸಾಗರವಾಗಿ ಪರಿಣಮಿಸಿತ್ತು ಆ ಜಾಗ. ಪ್ರಕೃತಿ ಕೂಡ ಶಾಂತವಾಗಿದ್ದು ಪಕ್ಷಿ-ಮೃಗಗಳು, ಮರವೃಕ್ಷಗಳು,‌ ಸಸ್ಯ ಲತಾದಿಗಳು ಎಲ್ಲವೂ ನಿಶ್ಚಲವಾಗಿ ಮಹಾನರ ಮರಣಕ್ಕೆ ಸಾಕ್ಷಿಯಾಗಿ ಕಣ್ಣೀರು ಹಾಕುತ್ತಿತ್ತು.‌

*ಸೂರ್ಯನ* ಪ್ರಖರ ರಶ್ಮಿ ಇಂದು ತುಂಬಾ ತೀಕ್ಷ್ಣವಾಗಿದ್ದು ಜನಜಂಗುಳಿಯಿಂದಲೂ, ಕಡು ಬಿಸಿಲಿನಿಂದಲೂ ಜನರು ಬೆವೆತು ಹೋಗಿದ್ದರು. ವಿದೂರ ದಿಕ್ಕುಗಳಿಂದ ಜನ ಪ್ರವಾಹ ಹರಿದು ಬರುತ್ತಿದ್ದವು. ಜನ ಪ್ರವಾಹ ಮುಗಿಯುವುದು ಸಾಧ್ಯವಿಲ್ಲ, ತುಂಬಾ ತಡ ಮಾಡಿದರೆ ಇಲ್ಲಿ ಹಾಜರಾದ ಜನರಿಗೆ ಆಯಾಸವಾಗಬಹುದು ಎಂದು ಮನಗಂಡು ಕುಟುಂಬಿಕರು ಬೇಗನೇ ಮಯ್ಯಿತ್ತ್ ಸ್ನಾನ ಮಾಡಿಸಿ, ಕಫನ್ ಬಟ್ಟೆ ಧರಿಸಿ ದಫನ್ ಮಾಡಲು ಕೊಂಡೊಯ್ಯಲು ಬೇಕಾಗಿ ಮನೆಯಿಂದ ಹೊರ ಬಂದಾಗ ಸುಡುವ ಬಿಸಿಲಿನ ಬೇಗೆ-ಬೇಗುದಿಯಿಂದ ಮನೆಯ ಹೊರ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಸರಿ ಸುಮಾರು 40,000 ಪಂಡಿತ ಶ್ರೇಷ್ಠರು, ಎಣಿಸಲಸಾಧ್ಯ ಸಾಧಾ ಜನರು, ಅವರ ಮಧ್ಯೆ ಸುಲೈಮಾನ್ ಎಂಬ ಈ ಸಣ್ಣ ಹುಡುಗ. ವಿದ್ವಾಂಸರು, ಸಾದಾ ಜನರು ಎಲ್ಲರೂ ಈ ಸಣ್ಣ ಮಗುವಿನಿಂದ ಸಹಾಯ ಯಾಚಿಸುತ್ತಿದ್ದರು..

*ಓ ಸುಲೈಮಾನ್*..ಸಹಾಯ ಮಾಡು, ಜನರೆಲ್ಲಾ ತುಂಬಾ ನೋವಿನಲ್ಲೂ, ಸಂಕಷ್ಟದಲ್ಲೂ ಇದ್ದಾರೆ, ಅವರನ್ನು ರಕ್ಷಿಸು..ಎಂದು ಜನ ಪರಸ್ಪರ ಕೂಗುತ್ತಿದ್ದರು..

*ಆಗ* ಮಗು ಸುಲೈಮಾನ್ ಮನೆಯಿಂದ ಹೊರ ಬಂದರು. ಹೂ..ಅದೆಂತಾ ಬಿಸಿಲು, ಈ‌ ಬಿಸಿಲಿನ ಬೇಗೆಯಿಂದ ಜನ ಪರಿತಪಿಸುತ್ತಿದ್ದು ಒಂದು ಹೆಜ್ಜೆ ಮುಂದಿಡಲೂ ಅಸಾಧ್ಯವಾದ ಪರಿಸ್ಥಿತಿ. ಈ ಸಣ್ಣ ಮಗು ತುಂಬಾ ಚಿಂತಿಸದೆ ತನ್ನ ಶಿರ ಮೇಲಕ್ಕೆತ್ತಿ ಆಕಾಶದತ್ತ ನೋಡಿ, ನಂತರ ಸುತ್ತಮುತ್ತಲೂ ನೋಡಿ ಒಂದೇ ಸಮನೆ ಜೋರಾಗಿ ಕರೆದು ಹೇಳುವರು...

*ಮುಂದುವರೆಯುವುದು..*

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ*

*👆🏻Share maximum..🤝🏻*