ಮದೀನಾ ಮಹತ್ವ ಇತಿಹಾಸ ಅಧ್ಯಾಯ 38


🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
   
      *ಸಂಗ್ರಹ: ಯಾಸೀನ್ ನಾವೂರ್*

               🍃 *ಅಧ್ಯಾಯ 38*🍃
         💜💜💜💜💜💜💜
🌹🌹🌹🌹🌹🌹🌹🌹🌹🌹🌹

*ಮಸ್ಜಿದು ಅಲಿಯ್ಯ್ (ರ.ಅ)*

ಇದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಮಾಜ್ ನಿರ್ವಹಿಸಿದ ಸ್ಥಳಗಳಲ್ಲಿ ಒಂದಾಗಿದೆ . ಇದು ಮಸ್ಜಿದು ಅಬೂಬಕರ್ (ರ) ನ ಉತ್ತರ ಭಾಗದಲ್ಲಿದೆ . ಇಲ್ಲಿ ಅಲಿಯ್ಯ್ (ರ) ರವರು ಈದ್ ನಮಾಜ್‌ಗೆ ನೇತೃತ್ವ ನೀಡಿದ್ದರು . ಅಲಿ (ರ) ರವರು ಖಿಲಾಫತಿನ ಆಡಳಿತವನ್ನು ವಹಿಸಿದ ನಂತರ ಮದೀನಾದಲ್ಲಿ ಯಾವುದೇ ಈದ್ ನಮಾಜ್‌ಗೆ ನೇತೃತ್ವ ನೀಡಿದ್ದು ಇತಿಹಾಸ ಪುಟಗಳಲ್ಲಿ ಕಾಣಸಿಗದು . ಆದರೆ ಅಲಿಯ್ಯ್ (ರ) ರವರು ಈದ್ ನಮಾಜ್‌ಗೆ ನೇತೃತ್ವ ನೀಡಿದ್ದು ಉಸ್ಮಾನ್ (ರ) ರವರ ಕಾಲದಲ್ಲಾಗಿತ್ತು . ಕೆಲವೊಂದು ಶತ್ರುಗಳು ಉಸ್ಮಾನ್ (ರ) ರವರಿಗೆ ದಿಗ್ಟಂಧನ ಹಾಕಿದಾಗ ಉಸ್ಮಾನ್ (ರ) ರವರು ಹೊರ ಬರಲಾಗದೆ ಮನೆಯಲ್ಲಿ ಬಾಕಿಯಾದರು . ಇದು ಹಿಜ್ರಾ 35 ದುಲ್ಹಿಜ್ಜ ತಿಂಗಳಲ್ಲಾಗಿತ್ತು . ಅಂದು ಮಕ್ಕಾದಲ್ಲಿ ನಡೆದ ಈದ್ ನಮಾಜ್‌ಗೆ ಅಬ್ದುಲಾಹಿ ಬಿನ್ ಅಬ್ಬಾಸ್ (ರ) ರವರು ನೇತೃತ್ವ ನೀಡಿದರು . ಮದೀನಾದಲ್ಲಿ ಅಲಿಯ್ಯ್ (ರ) ರವರು ಈದ್ ನಮಾಜ್‌ಗೆ ನೇತೃತ್ವ ನೀಡಿದರು .

*ಮಸ್ಜಿದುಲ್ ಫತ್‌ಹ್*

            ಮದೀನಾದ ಪಶ್ಚಿಮ ಭಾಗದಲ್ಲಿರುವ ಸಲ್ಅ್ ಪರ್ವತದ ಮೇಲೆಯಾಗಿದೆ ಈ ಮಸೀದಿ ಇರುವುದು. ಖಂದಕ್ ಯುದ್ಧದಲ್ಲಿ ಶತ್ರು ಸೇನೆಗಳಿಗೆ ವಿರುದ್ಧವಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಾರ್ಥನೆ ಮಾಡಿದ್ದು ಈ ಸ್ಥಳದಲ್ಲಾಗಿದೆ . ಅಲ್ಲಾಹನು ಪ್ರವಾದಿವರ್ಯರ ಪ್ರಾರ್ಥನೆಗೆ ಉತ್ತರ ನೀಡಿದ. ಭೀಕರ ಸುಂಟರ ಗಾಳಿಯಿಂದ ಶತ್ರು ಸೇನೆ ದಿಕ್ಕಾಪಾಲಾಯಿತು . ಫತ್ಹ್ ಎಂದರೆ ವಿಜಯ ಎಂದಾಗಿದೆ . ಪ್ರವಾದಿವರ್ಯರು ಯುದ್ಧ ವಿಜಯಕ್ಕೆ ಬೇಕಾಗಿ ಪ್ರಾರ್ಥಿಸಿ ಉತ್ತರ ಲಭಿಸಿದ ಕಾರಣ ಈ ಮಸೀದಿಗೆ ಮಸ್ಜಿದುಲ್ ಫತ್ಹ್ ಎಂಬ ಹೆಸರು ಬಂತು . ಸೂರತುಲ್ ಫತ್ಹ್ ಈ ಸ್ಥಳದಲ್ಲಿ ಅವತೀರ್ಣಗೊಂಡ ಕಾರಣ ಹೆಸರು ಬಂದಿದೆ ಎಂಬುವುದು ಕೆಲವು ವಿದ್ವಾಂಸರ ಅಭಿಮತ . ಪ್ರವಾದಿವರ್ಯರು ಅಹ್ಝಾಬ್ ಯುದ್ಧದ ವಿಜಯಕ್ಕಾಗಿ ಈ ಸ್ಥಳದಲ್ಲಿ ಪ್ರಾರ್ಥಿಸಿದ ಕಾರಣ ಇದಕ್ಕೆ ಮಸ್ಜಿದುಲ್ ಅಹ್ಝಾಬ್ ಎಂದು ಕರೆಯಲಾಗುತ್ತದೆ . ಪ್ರರ್ವತದ ಮೇಲೆ ಈ ಮಸೀದಿ ಇರುವುದರಿಂದ ಮಸ್ಜಿದುಲ್ ಅಅ್ಲಾ ಎಂಬ ನಾಮ ಕೂಡಾ ಇದೆ . 

*ಮಸ್ಜಿದು ಸಲ್ಮಾನಿಲ್ ಫಾರಿಸಿ (ರ)*

             ಈ ಮಸೀದಿ ಮಸ್ಜಿದುಲ್ ಫತ್‌ನ ದಕ್ಷಿಣದ ಕೆಳಭಾಗದಲ್ಲಿದೆ. ಖಂದಕ್ ಯುದ್ಧದಲ್ಲಿ ಮದೀನಾವನ್ನು ಆಕ್ರಮಿಸಲು ಬರುವ ಶತ್ರುಗಳನ್ನು ತಡೆಯಲು ಹೊಂಡ ತೋಡಲು ಸಲ್ಮಾನುಲ್ ಫಾರಿಸಿ (ರ) ರವರು ನಿರ್ದೇಶಿಸಿದ್ದರಿಂದ ಈ ಮಸೀದಿಗೆ ಮಸ್ಜಿದು ಸಲ್ಮಾನಿಲ್ ಫಾರಿಸಿ ಎಂಬ ಹೆಸರು ಬಂದಿದೆ . ಪ್ರವಾದಿವರ್ಯರು ಅಹ್ಝಾಬ್ ಯುದ್ಧದಲ್ಲಿ ವಿಜಯಕ್ಕಾಗಿ ಸಅ್ಲ್ ಪರ್ವತಕ್ಕೆ ಹತ್ತಿ ಪ್ರಾರ್ಥಿಸುವ ಮೊದಲು ಈ ಸ್ಥಳದಲ್ಲಿ ನಮಾಜ್ ಮಾಡಿದ್ದರು .

*ಮಸ್ಜಿದು ಬನೀ ಖುರೈಳಾ*

         ಬನೂ ಖುರೈಳಾ ಯುದ್ಧದಲ್ಲಿ ಯಹೂದಿಗಳಿಗೆ ದಿಗ್ಟಂಧನ ಹಾಕಿದ ಸಮಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ನಮಾಝ್ ಮಾಡಿದ ಸ್ಥಳವಾಗಿದೆ ಇದು . ಆದ್ದರಿಂದ ಇದಕ್ಕೆ ಮಸ್ಜಿದು ಬನೀ ಖುರೈಳಾ ಎಂಬ ಹೆಸರು ಬಂದಿದೆ . ಉಮರ್ ಬಿನ್ ಅಬ್ದುಲ್ ಅಝೀಝ್ (ರ) ರವರು ತನ್ನ ಆಡಳಿತದಲ್ಲಿ ಈ ಮಸೀದಿಯನ್ನು ನಿರ್ಮಿಸಿದರು . 

*ಮಸ್ಜಿದು ಸ್ಸುಖಿಯ್ಯಾ* 

            ಇದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮಾಡಿದ ಸ್ಥಳಗಳಲ್ಲಿ ಒಂದಾಗಿದೆ . ಸಅದ್ ಬಿನ್ ಅಬೀ ವಕಾಸ್ (ರ) ರವರ ಒಡೆತನಕ್ಕೆ ಸೇರಿದ ಈ ಸ್ಥಳದಲ್ಲಿ ಸುಖಿಯ್ಯಾ ಎಂಬ ಬಾವಿಯಿತ್ತು . ಇದರಲ್ಲಿ ಅಂಗಸ್ನಾನ ಮಾಡಿದ ಪ್ರವಾದಿವರ್ಯರು ಹತ್ತಿರದಲ್ಲಿ ನಮಾಜ್ ಮಾಡಿದರು .ಭ ಆದ್ದರಿಂದ ಈ ಮಸೀದಿಗೆ ಮಸ್ಜಿದು ಸ್ಸುಖಿಯ್ಯಾ ಎಂಬ ಹೆಸರು ಬಂದಿದೆ . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಮದೀನಾದ ಬರಕತ್ತಿಗೆ ಬೇಕಾಗಿ ಪ್ರಾರ್ಥನೆ ನಡೆಸಿದ್ದು ಈ ಸ್ಥಳದಲ್ಲಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಇಲ್ಲಿದ್ದ ಸುಖಿಯ್ಯಾ ಬಾವಿಯಿಂದ ನೀರು ಕುಡಿಯುತ್ತಿದ್ದರು . 

*ಮಸ್ಜಿದು ಸ್ಸಜದ*

          ಪ್ರವಾದಿವರ್ಯರು ದೀರ್ಘವಾದ ಸುಜೂದ್ ಮಾಡಿದ ಸ್ಥಳವಾಗಿದೆ ಇದು . ಅಬ್ದುರ್ರಹ್ಮಾನ್ ಬಿನ್ ಔಫ್ (ರ) ಹೇಳುತ್ತಾರೆ “ ಪ್ರವಾದಿವರ್ಯರ ಈ ದೀರ್ಘ ಸುಜೂದನ್ನು ಕಂಡಾಗ ಅಲ್ಲಾಹನು ರೂಹ್ ಹಿಡಿದನೇ ? ಎಂದು ನಾವು ಭಾವಿಸಿದೆವು . ಹಾಗೆ ನಾನು ಪ್ರವಾದಿವರ್ಯರ ಹತ್ತಿರ ಹೋಗಿ ಕುಳಿತುಕೊಂಡೆನು . ತಲೆ ಎತ್ತಿ ಪ್ರವಾದಿವರ್ಯರು ಯಾರು ? ಎಂದರು . ನಾನು ಅಬ್ದುರಹ್ಮಾನ್ ಎಂದು ಹೇಳಿದೆ . ಯಾಕೆ ಬಂದೆ ? ತಮ್ಮ ದೀರ್ಘ ಸುಜೂದು ಕಂಡು ರೂಹ್ ಹಿಡಿಯಲಾಯಿತೇ ಏನೋ .. ? ಎಂದು ಭಯವಾಯಿತು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಹೇಳುತ್ತಾರೆ “ ಜಿಬ್ರೀಲ್ (ಅ) ರವರು ಬಂದು ನನಗೆ ಸುವಾರ್ತೆಯೊಂದನ್ನು ನೀಡಿದರು “ ನನ್ನ ಮೇಲೆ ಸ್ವಲಾತ್ಸಲಾಮ್‌ಗಳನ್ನು ಹೇಳು ವವರಿಗೆ ಅಲ್ಲಾಹನು ಧಾರಾಳ ಒಳಿತುಗಳನ್ನು ಕರುಣಿಸುವನು ” ಎಂದು ಅಲ್ಲಾಹನು ಹೇಳಿದ್ದಾನೆ . ಇದಕ್ಕೆ ಕೃತಜ್ಞತೆಯಾಗಿ ದೀರ್ಘ ಸುಜೂದ್ ಮಾಡಿದೆ . ಪ್ರವಾದಿವರ್ಯರು ಕೃತಜ್ಞತೆಗಾಗಿ ಇಲ್ಲಿ ಸುಜೂದ್ ಮಾಡಿದ ಕಾರಣ ಮಸ್ಜಿದು ಶುಕ್‌ರ್ ಎಂಬ ನಾಮ ಕೂಡಾ ಇದೆ .ಮಸ್ಜಿದು ಅಬೀದ್ಸರ್ರ್ (ರ) ಎಂದು ಕೂಡಾ ಕರೆಯುತ್ತಾರೆ . 

*ಮಸ್ಜಿದು ಶೈಖೈನಿ* 

       ಶೈಖೈನಿ ಎಂಬ ಸ್ಥಳದಲ್ಲಿರುವ ಕಾರಣ ಈ ಮಸೀದಿಗೆ ಮಸ್ಜಿದುಶೈಖೈನಿ ಎಂಬ ಹೆಸರು ಬಂದಿದೆ . ಮದೀನಾ ಹಾಗೂ ಉಹ್ದ್ ಪರ್ವತದ ನಡುವೆಯಿರುವ ಸ್ಥಳವಾಗಿದೆ ಈ ಶೈಖೈನಿ ಎನ್ನುವುದು . ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಉಹ್ದ್ ಯುದ್ಧಕ್ಕೆ ಹೋಗುವಾಗ ಇಲ್ಲಿ ಡೇರೆಯೊಂದನ್ನು ನಿರ್ಮಿಸಿದ್ದರು .ಉಹ್ದ್ ಯುದ್ಧದ ಸಮಯದಲ್ಲಿ ಹಲವಾರು ಬಾರಿ ಇಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ಮಾಡಿದ್ದಾರೆ.

     *ಮುಂದುವರಿಯುವುದು*