ಮದೀನಾ ಮಹತ್ವ ಇತಿಹಾಸ ಅಧ್ಯಾಯ 14

🌟🌟🌟🌟🌟🌟🌟🌟
*ಮದೀನಾ ಮಹತ್ವ ಇತಿಹಾಸ*
💫💫💫💫💫💫💫💫
   *ಮೂಲ: ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ*
     
   *ಸಂಗ್ರಹ: ಯಾಸೀನ್ ನಾವೂರ್*

               🍃 ಅಧ್ಯಾಯ 14🍃
         💜💜💜💜💜💜💜

 ❤️ ಎರಡನೇ ಅಖಬ ಬೈಅತ್ !
 ❤️ ಪ್ರವಾದಿವರ್ಯರ ಮದೀನಾ ಪಯಣ
🌹🌹🌹🌹🌹🌹🌹🌹🌹🌹🌹 
    ಮದೀನಾ ಸಂಪೂರ್ಣವಾಗಿ ಇಸ್ಲಾಮಿನತ್ತ ವಾಲುತ್ತಿದೆ. ಮುಂದಿನ ವರ್ಷದ ಹಜ್  ಸಂಭ್ರಮಕ್ಕೆ ಮಕ್ಕಾ ಸಂಪೂರ್ಣ ಸಿದ್ಧಗೊಂಡಿದೆ. ಇದಕ್ಕೆ ಮೊದಲು ಮುಸ್ಅಬ್ ಬಿನ್ ಉಮೈರ್ ( ರ ) ರವರು ಮದೀನಾದಿಂದ ಮಕ್ಕಾಗೆ ಮರಳಿದರು . ಮದೀನಾದ ಇಸ್ಲಾಮಿ ಪ್ರಭೋಧನೆಯ ಯಶಸ್ಸಿನ ಕುರಿತು ತಿಳಿಸುವುದಾಗಿತ್ತು ಈ ಭೇಟಿ ಉದ್ದೇಶ . ಹಾಗೆ ಮದೀನಾದಲ್ಲಿರುವ ಹಲವು ಗೋತ್ರಗಳು ಇಸ್ಲಾಂ ಸ್ವೀಕರಿಸಿದ ಬಗ್ಗೆ ಪ್ರವಾದಿವರ್ಯರೊಂದಿಗೆ ಸಂತಸ ಹಂಚಿದರು . ಪ್ರವಾದಿತ್ವದ 13ನೇ ವರ್ಷ ಮದೀನಾದಿಂದ 75 ಜನರು ಬಂದರು . ಇವರಲ್ಲಿ 73 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು . ಶತ್ರುಗಳಿಗೆ ತಿಳಿಯದಂತೆ ಪ್ರವಾದಿವರ್ಯರನ್ನು ರಹಸ್ಯವಾಗಿ ಭೇಟಿಯಾದರು . ಮಿನಾದ ಒಂದು ಕಣಿವೆಯಲ್ಲಾಗಿತ್ತು ಈ ರಹಸ್ಯ ಭೇಟಿ . ಪ್ರವಾದಿವರ್ಯರು ಅವರೊಂದಿಗೆ ಸಂಭಾಷಣೆ ನಡೆಸಿದರು . ಪವಿತ್ರ ಖುರ್‌ಆನಿನ ಸೂಕ್ತಗಳನ್ನು ಓದಿಕೊಟ್ಟರು . ಇಸ್ಲಾಮಿನ ಸಂದೇಶಗಳನ್ನು ಇನ್ನಷ್ಟು ತಿಳಿಸಿಕೊಟ್ಟರು . ಪುರುಷರಲ್ಲಿ ಪ್ರತಿಯೊಬ್ಬರು ಪ್ರವಾದಿವರ್ಯರ ಕೈ ಹಿಡಿದು ಬೈಅತ್ ಮಾಡಿದರು . ಪ್ರವಾದಿವರ್ಯರು ಅವರಿಗೆ 12 ಜನರ ನೇತಾರರನ್ನು ಆಯ್ಕೆ ಮಾಡಿದರು . 9 ಮಂದಿ ಖಧೀರಜ್ ಗೋತ್ರದವರು ಹಾಗೂ ಇಬ್ಬರು ಔಸ್ ಗೋತ್ರದವರು . 

  ಪ್ರವಾದಿವರ್ಯರ ಮದೀನಾ ಪಯಣ 
..........................................................
                   ಶತ್ರುಗಳಿಂದ ನಿರಂತರವಾಗಿ ಪೀಡಿಸಲ್ಪಡುತ್ತಿದ್ದ ಮುಸ್ಲಿಮರಿಗೆ ಹಿಜ್ರ ಹೋಗಲು ಪ್ರವಾದಿವರ್ಯರು ಸಮ್ಮತಿ ನೀಡಿದರು . ಅದರಂತೆ ಸ್ವಹಾಬಿಗಳು ತಮ್ಮ ಮನೆ - ಮಠಗಳನ್ನು ತ್ಯಜಿಸಿ ಒಂಟಿಯಾಗಿ ಹಾಗೂ ಸಂಘಗಳಾಗಿ ಮದೀನಾಗೆ ಹಿಜ್ರ ಹೋಗಲು ಶುರು ಮಾಡಿ ದರು . ತಮ್ಮ ಸಂಪತ್ತು ಕುಟುಂಬ ಹೀಗೆ ಎಲ್ಲವನ್ನು ಬಿಟ್ಟು ಮುಸ್ಲಿಮರು ಮದೀನಾದತ್ತ ಪಯಣ ಬೆಳೆಸಿದ್ದು ಬರೀ ಈಮಾನಿನ ಸಂರಕ್ಷಣೆಗೆ ಮಾತ್ರವಾಗಿತ್ತು . ಹೌದು ಮದೀನಾ ಈಮಾನಿನ ಅಭಯ ತಾಣ . ಇವರೆಲ್ಲರು ರಹಸ್ಯವಾಗಿ ಶತ್ರುಗಳಿಗೆ ತಿಳಿಯದಂತೆ ಯಾತ್ರೆ ಹೋಗುತಿದ್ದರು . ಒಂದುವೇಳೆ ತಿಳಿದರೆ ತಡೆಯುತ್ತಿದ್ದರು . ಇನ್ನಷ್ಟು ಉಪಟಳ ನೀಡುವ ಸಾಧ್ಯತೆ ಇತ್ತು . ಆದರೆ ಉಮರ್ ( ರ ) ಬಹಿರಂಗ ಸವಾಲು ಹಾಕಿ ಮದೀನಾಗೆ ಹಿಜ್ರ ಹೋಗುವ ತೀರ್ಮಾನ ಮಾಡಿದರು . ಆಯುಧದಾರಿಯಾಗಿ ಕಅಬಾಲಯವನ್ನು ತವಾಫ್ ಮಾಡಿ ಮಖಾಮ್ ಇಬ್ರಾಹೀಂ ಬಳಿ ನಮಾಝ್ ಮಾಡಿ ಮಕ್ಕಾ ಮುಶ್ರಿಕರೊಂದಿಗೆ ಬಹಿರಂಗ ಸವಾಲು ಹಾಕಿದರು “ ತಾಯಿ ಮಗನನ್ನು ಕಳೆದುಕೊಳ್ಳಲು , ಮಕ್ಕಳು ಅನಾಥರಾಗಲು ಹಾಗೂ ಪತ್ನಿಯರು ವಿಧವೆಯಾಗಲು ಯಾರಾದರೂ ಬಯಸುವುದಾದರೆ ನನ್ನನ್ನು ತಡೆಯಲು ಬರಲಿ ” ಈ ಸವಾಲು ಸ್ವೀಕರಿಸುವ ಗಂಡೆದೆ ಅಲ್ಲಿ ಯಾರಿಗೂ ಇರಲಿಲ್ಲ . ಒಂದು ನರಪಿಳ್ಳೆ ಕೂಡಾ ಅತ್ತ ಸುಳಿಯಲಿಲ್ಲ . ಕೊನೆಗೆ ಪ್ರವಾದಿವರ್ಯರ ಜೊತೆ ಅಬೂಬಕರ್ ಸಿದ್ದೀಖ್ ( ರ ) , ಅಲಿ ( ರ ) ರವರು ಹಾಗೂ ದೈಹಿಕವಾಗಿ ಸುದೃಢವಲ್ಲದ ಕೆಲವು ಮಂದಿ ಸ್ವಹಾಬಿಗಳು ಉಳಿದಿದ್ದರು . ಅಬೂಬಕರ್ ಸಿದ್ದೀಕ್ ( ರ ) ರವರು ಪ್ರವಾದಿವರ್ಯರ ಜೊತೆ ಹಿಜ್ರ ಹೋಗಲು ಕಾಯುತ್ತಿದ್ದರು . ಅಲಿ ( ರ ) ರವರು ಪ್ರವಾದಿವರ್ಯರು ಹಿಜ್ರ ಹೋದ ನಂತರ ಜನರು ಜೋಪಾನವಾಗಿ ಇಡಲು ಕೊಟ್ಟಿದ್ದ ವಸ್ತುಗಳನ್ನು ಮರಳಿಸಲು ನಿಂತಿದ್ದರು .
      
     ಮುಂದುವರಿಯುವುದು